Saturday, October 3, 2009

ದಿವಾಕರತನುಜಂ

ದಿವಾಕರತನುಜಂ

ರಾಗ: ಯದುಕುಲಕಾಂಭೋಜಿ
ತಾಳ: ಏಕತಾಳ

ಪಲ್ಲವಿ:
||ದಿವಾಕರತನುಜಂ ಶನೈಶ್ಚರಂ||
||ಧೀರತರಂ ಸಂತತಂ ಚಿಂತಯೇಹಂ||

ಅನುಪಲ್ಲವಿ:
||ಭವಾಂಬುನಿಧೌನಿ ಮಗ್ನ ಜನಾನಾಂ, ಭಯಂಕರಂ ಅತಿಕ್ರೂರಫಲದಂ||
||ನೀಲಾಂಶುಕ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||


ಚರಣ: 
||ಕಾಲಾಂಜನ ಕಾಂತೆಯುಕ್ತದೇಹಂ ಕಾಲಸಹೋದರಂ ಕಾಕವಾಹನಂ||
||ನೀಲಾಂಕುಶ ಪುಷ್ಪಮಾಲಾವೃತಂ ನೀಲರತ್ನ ಭೂಷಣಾಲಂಕೃತಂ||
||ಮಾಲಿನೀ ವಿನುತ ಗುರುಗುಹಮುದಿತಂ ಮಕರ ಕುಂಭರಾಶಿನಾಥಂ||
||ತಿಲತೈಲ ಮಿಶ್ರಿತಾನ್ನ ದೀಪಪ್ರಿಯಂ ದಯಾಸುಧಾಸಾಗರಂ ನಿರ್ಭಯಂ||
||ಕಾಲದಂಡ ಪರಿಪೀಡಿತ ಜಾನುಂ ಕಾಮಿತಾರ್ಥಫಲದ ಕಾಮಧೇನುಂ||
||ಕಾಲಚಕ್ರ ಭೇಧ ಚಿತ್ರಭಾನುಂ ಕುಲ್ಪಿತಚ್ಛಾಯಾದೇವಿ ಸುತಂ||

ತಾತ್ಪರ್ಯ:
ಸೂರ್ಯಪುತ್ರನೂ, ಧೀರನೂ, ಆದ ಶನೀಶ್ಚರನನ್ನು ಸತತ ಧ್ಯಾನ ಮಾಡುವೆ. ಸಂಸಾರ ಸಾಗರದಲ್ಲಿ ಮುಳುಗುವವರಿಗೆ ಭಯಂಕರನೂ, ಕ್ರೂರವಾದ ಫಲಗಳನ್ನು ಕೊಡುವವನೂ ಆದ ನೀನು, ಹೇ! ಶನೀಶ್ಚರ! ದೇವರ ಕಟಾಕ್ಷಕ್ಕೆ ಬಿದ್ದ ಭಕ್ತರ ಪಾಲಿಗೆ ಶುಭಫಲಗಳನ್ನು ಕೊಡುವವನಾಗಿದ್ದೀಯೆ! ನಿನ್ನನ್ನು ಸದಾ ಧ್ಯಾನಿಸುವೆ.

ಕಾಡಿಗೆಯಂತೆ ಕಪ್ಪಾದ ದೇಹವುಳ್ಳವನು ನೀನು. ಯಮಧರ್ಮನ ಸಹೋದರ. ಕಾಕವಾಹನ. ನೀಲಿಬಣ್ಣದ ವಸ್ತ್ರ ಉಟ್ಟು ಪುಷ್ಪಗಳಿಂದ ಆವೃತನಾಗಿರುವೆ. ರತ್ನಾಭರಣ ಭೂಷಿತನಾಗಿರುವೆ. ಮಾಲಿನಿಯಿಂದ ಸ್ತುತಿಸಲ್ಪಡುವವನೂ, ಗುರುಗುಹ ಸಂತೋಷನೂ ಆಗಿರುವೆ. ಮಕರ ಕುಂಭ ರಾಶಿಗಳಿಗೆ ಒಡೆಯ ನೀನು. ಎಳ್ಳೆಣ್ಣೆಯ ದೀಪ ಮತ್ತು ಅನ್ನ ನಿನಗೆ ಪ್ರಿಯ. ದಯಾಸಾಗರನಾದ ಭಗವನ್! ಸದಾ ನಿನ್ನ ಧ್ಯಾನವೇ ನನಗೆ. ಯಮದಂಡದಿಂದ ಗಾಯಗೊಂಡ ಮಂಡಿಯುಳ್ಳವನೂ, ಇಷ್ಟಾರ್ಥಗಳನ್ನು ಕರುಣಿಸುವ ಕಾಮಧೇನುವೂ ಆಗಿರುವೆ. ಕಾಲಚಕ್ರವನ್ನು ಭೇದಿಸಿವ ಸೂರ್ಯ-ಛಾಯಾದೇವಿಯರ ಸುತನೂ ಆದ ಶನೀಶ್ಚರ! ನಿನ್ನನ್ನು ಸದಾ ಧ್ಯಾನ ಮಾಡುವೆ.

ಯದುಕುಲಕಾಂಭೋಜಿ ರಾಗ ಲಕ್ಷಣ
ಆರೋಹಣ: ಸ ರಿ ಮ ಪ ಧ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಈ ರಾಗವು ೨೮ನೇ‌ಮೇಳ ಹರಿಕಾಂಭೋಜಿಯಲ್ಲಿ ಜನ್ಯ. ಈ ರಾಗದಲ್ಲಿ ಷಡ್ಜ-ಪಂಚಮಗಳೊಂದಿಗೆ ಬರುವ ಸ್ವರಸ್ಥಾನಗಳು: ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿ ಧೈವತ ಮತ್ತು ಕೈಶಿಕಿ ನಷಾದ. ಕಾಂಭೋಜಿ ರಾಗದಂತೆ ಈ ರಾಗದಲ್ಲಿ ಕೂಡ ಕೆಲವು ಪ್ರಯೋಗಗಳಲ್ಲಿ ಕಾಕಲಿ ನಿಷಾದವು ಬರುತ್ತದೆ. ಔಡವ ಸಂಪೂರ್ಣರಾಗ. ಭಾಷಾಂಗ ರಾಗ. ಕಾಕಲಿ ನಿಷಾದ ಅನ್ಯಸ್ವರ. ಸಾ ನಿ ಪಾ ಧ ಸಾ ಎಂಬ ಪ್ರಯೋಗದಲ್ಲಿ ಕಾಕಲಿ ನಿಷಾದವು ಬರುತ್ತದೆ. ಸಾ ಪ ಧಾ ಸಾ - ಸ ರಿ ಗ ಮ ಸಾ - ಸ ರಿ ಮಾ ಮಾ - ಗ ಮ ಪಾ ಪಾ - ಮ ಪ ಧಾ ಧಾ - ಮಾ ಪ ಧ ಸಾ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ತುಂಬಾ ಅನುಭವಸ್ಥರಿಂದ ಕೇಳಬೇಕು. ಯಾವಾಗಲೂ ಹಾಡಬಹುದು. ಆದರೂ ರಾತ್ರಿ ಹಾಡುವುದಕ್ಕೆ ತುಂಬಾ ರಂಜನೆಯುಳ್ಳದ್ದಾಗಿರುತ್ತದೆ. ಭಕ್ತಿ ಮತ್ತು ಕರುಣಾ ರಸ ಪ್ರಧಾನ ರಾಗ.