Friday, October 2, 2009

ಶ್ರೀ ಶುಕ್ರಭಗವಂತಂ

ಶ್ರೀ ಶುಕ್ರಭಗವಂತಂ

ರಾಗ: ಘರಜ್
ತಾಳ: ಅಟತಾಳ

ಪಲ್ಲವಿ:
||ಶ್ರೀಶುಕ್ರ ಭಗವಂತಂ ಚಿಂತಯಾಮಿ||
|| ಸಂತತಂ ಸಕಲ ತತ್ವಜ್ಞಂ||

ಅನುಪಲ್ಲವಿ:
||ಹೇ ಶುಕ್ರಭಗವನ್ ಮಾಂ ಆಶು ಪಾಲಯ, ವೃಷ ತುಲಾಧೀಶ ದೈತ್ಯ||‌
||ಹಿತೋಪದೇಶ, ಕೇಶವಕಟಾಕ್ಷೈಕನೇತ್ರಂ ಕಿರೀಟಧರಂ ಧವಳಗಾತ್ರಂ||

ಚರಣ:
||ವಿಂಶತಿ ವತ್ಸರೋಡುದಶಾವಿಭಾಗಮಷ್ಟವರ್ಗಂ||
||ಕವಿಂ ಕಳತ್ರಕಾರಕಂ ರವಿನಿರ್ಜರ ಗುರುವೈರಿಣಂ||
||ನವಾಂಶ ಹೋರಾದ್ರೇಕ್ಕಾಣಾದಿ ವರ್ಗೋತ್ತಮಾವಸರಸಮಯೇ||
||ವಕ್ರೋಚ್ಚನೀಚ ಸ್ವಕ್ಷೇತ್ರವರಕೇಂದ್ರ ಮೂಲತ್ರಿಕೋಣೇ||
||ತ್ರಿಂಶಾಂಶಷಷ್ಟ್ಯಾಂಶೈರಾವತಾಂಶ ಪಾರಿಜಾತಾಂಶ ಗೋಪುರಾಂಶ||
||ರಾಜಯೋಗಕಾರಕಂ ರಾಜ್ಯಪ್ರದಂ ಗುರುಗುಹಮುದಂ||

ತಾತ್ಪರ್ಯ:
ಸಕಲ ತತ್ವಜ್ಞನಾದ ಶ್ರೀ ಶುಕ್ರಭಗವಂತನನ್ನು ಸದಾ ಧ್ಯಾನಿಸುವೆ. ಹೇ! ವೃಷಭ ತುಲಾರಾಶಿಗಳ ಅಧಿಪನೇ! ಅಸುರಾಚಾರ್ಯನೇ! ಶುಕ್ರಾಚಾರ್ಯನೇ ನನ್ನನ್ನು ರಕ್ಷಿಸು.

ಭಗವಂತನ ಕೃಪಾದೃಷ್ಟಿಗೆ ಪಾತ್ರನಾದವನೂ, ಒಂದೇ ಕಣ್ಣುಳ್ಳವನೂ, ಕಿರೀಟಧಾರಿಯೂ ಬಿಳುಪಾದ ಬಣ್ಣವುಳ್ಳವನೂ, ಆದ ನೀನು ನನ್ನನ್ನು ಕಾಪಾಡು. ಹೇ‌ಭಗವನ್! ನೀನು ಉಡುದೆಶೆಯಲ್ಲಿ ಇಪ್ಪತ್ತು ವರ್ಷ ದಶಾಕಾಲವನ್ನು ಹೊಂದಿರುವೆ. ಅಷ್ಟವರ್ಗವುಳ್ಳವನೂ, ಕ್ರಾಂತಿದರ್ಶಿಯೂ ಆಗಿರುವೆ. ಪತ್ನಿಕಾರಕ ನೀನು. ಸೂರ್ಯ, ಗುರು ಗ್ರಹಗಳಿಗೆ ಶತ್ರು. ನವಾಂಶ, ಹೋರಾ, ದ್ರೇಕ್ಕಾಣ ಮೊದಲಾದ ವರ್ಗೋತ್ತಮ ಕಾಲದಲ್ಲಿ ವಕ್ರ, ಉಚ್ಚ, ನೀಚಸ್ಥಿತಿ, ಸ್ವಕ್ಷೇತ್ರ, ಕೇಂದ್ರ, ಮೂಲತ್ರಿಕೋನಗಳಲ್ಲಿ ತ್ರಿಂಶಾಂಶ, ಷಷ್ಟ್ಯಂಶ, ಐರಾವತಾಂಶ, ಪಾರಿಜಾತಾಂಶ, ಗೋಪ್ರರಾಂಶಗಳಿಂದ ರಾಜಯೋಗವನ್ನುಂಟು ಮಾಡುವ, ರಾಜ್ಯದಾಯಕನೂ, ಗುರುಗುಹನಿಗೆ ಸಂತಸವನ್ನೀಯುವ ಹ್R ಭಗವನ್! ಕಾಪಾಡು!

ಘರಜ್ ರಾಗ ಲಕ್ಷಣ:
ಆರೋಹಣ: ಸ ರಿ ಗ ಮ ಧ ನಿ ಸ
ಅವರೋಹಣ: ಸ ನಿ ಧ ಪ ಮ ಗ ರಿ ಸ

ಘರಜ್ ರಾಗವು ೧೫ನೇ ಮೇಳರಾಗದಲ್ಲಿ ಜನ್ಯ. ಉಪಾಂಗ, ದೇಶೀಯ, ರಕ್ತಿರಾಗ. ಷಾಡವ ಸಂಪೂರ್ಣರಾಗ. ಗಾಂಧಾರ, ಮಧ್ಯಮ, ಜೀವಸ್ವರಗಳು. ಗಾಂಧಾರ ನ್ಯಾಸಸ್ವರ. ಸ ಗಾ ಮ ಪ ಮ ಧ ನಿ ಸ - ಸ ನಿ ಧ ಪ ಮ - ಮ ನಿ ಧ ಪ ಮ ಗ ಮ ಪ - ಸ* ನಿ ಧ ಪ ಮ ಪ ಗ ಮ - ಮ ನಿ ಧ ಮ ಗ ರಿ ಗ ಮ - ಧಾ ಧ ನಿ ಸ* ರಿ* ಸ* - ನಿ ಗ* ರಿ* ಸ* - ನಿ ಸ* ನಿ ಧ ಸ* - ಧ ಸ* ನಿ ಧ ಪ ಮ ಪ ಗ ಗ ಮ ನಿ ಧ ಮ ಗಾ ರಿ - ಮುಂತಾದ ಪ್ರಯೋಗಗಳು ರಂಜಕವಾಗಿರುತ್ತದೆ. ಈ ರಾಗದಲ್ಲಿ ಅನೇಕ ಜಾವಳಿಗಳು ಮತ್ತಿ ತಿಲ್ಲಾನಗಳಿವೆ. ಕೇಳಿ ಅನುಭವದಿಂದ ಕಲಿಯಬೇಕಾದ ರಾಗ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಶುದ್ಧ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಶುದ್ಧ ಧೈವತ, ಕಾಕಲಿ ನಿಷಾದ.

No comments:

Post a Comment