Thursday, October 1, 2009

ಬೃಹಸ್ಪತೇ

ಬೃಹಸ್ಪತೇ

ರಾಗ: ಅಠಾಣ.
ತಾಳ: ತ್ರಿಪುಟತಾಳ (ತ್ರಿಶ್ರಜಾತಿ)

ಪಲ್ಲವಿ:
||ಬೃಹಸ್ಪತೇ ತಾರಾಪತೇ ಬ್ರಹ್ಮಜಾತೇ ನಮೋಸ್ತುತೇ||

ಅನುಪಲ್ಲವಿ:
||ಮಹಾಬಲವಿಭೋ ಗೀಷ್ಪತೇ ಮಂಜುಧನುರ್ಮೀನಾಧಿಪತೇ||
||ಮಹೇಂದ್ರಾದ್ಯುಪಾಸಿತಾಕೃತೇ ಮಾಧವಾದಿವಿನುತಧೀಮತೇ||

ಚರಣ:
||ಸುರಾಚಾರ್ಯವರ್ಯ ವಜ್ರಧರ, ಶುಭಲಕ್ಷಣ ಜಗತ್ರಯಗುರೋ||‌
||ಜರಾದಿ ವರ್ಜಿತಕ್ರೋಧ, ಕಚಜನಕಾಶೃತಜನಕಲ್ಪತರೋ||
||ಪುರಾರಿಗುರುಗುಹ ಸಮ್ಮೋದಿತ, ಪುತ್ರಕಾರಕ ದೀನಬಂಧೋ||
||ಪರಾದಿ ಚತ್ವಾರಿವಾ ಕ್ಸ್ವ ರೂಪಪ್ರಕಾಶಕ ದಯಾಸಿಂಧೋ||
||ನಿರಾಮಯಾಯ ನೀತಿಕರ್ತ್ರೇ, ನಿರಂಕುಶಾಯ ವಿಶ್ವಭರ್ತ್ರೇ||‌
||ನಿರಂಜನಾಯ ಭುವನಭೋಕ್ತ್ರೇ, ನಿರಂಶಾಯ ಸುಖಪ್ರದಾತ್ರೇ||‌

ತಾತ್ಪರ್ಯ:
ನಕ್ಷತ್ರಾಧಿಪನೇ! ಬ್ರಹ್ಮಕುಲಜನಾದ ಬೃಹಸ್ಪತಿಯೇ!‌ನಿನಗೆ ನಮಸ್ಕಾರ! ನೀನು ಮಹಾಬಲಿಷ್ಟನೂ ಸರ್ವ ಶೇಷ್ಠನೂ, ಧನಸ್ಸು ಮತ್ತು ಮೀನರಾಶಿಗಳ ಅಧಿಪತಿಯೂ ಆಗಿದ್ದೀಯೆ. ಇಂದ್ರಾದಿಗಳು ನಿನ್ನನ್ನು ಪೂಜಿಸುತ್ತಾರೆ. ವಿಷ್ಣುವೇ‌ಮೊದಲಾದ ದೇವರುಗಳು ನಿನ್ನನ್ನು ಸ್ತುತಿಸುತ್ತಾರೆ. ಮಹಾ ಪ್ರಾಜ್ಞನಾದ ನಿನ್ನನ್ನು ನಮಸ್ಕರಿಸುತ್ತಾರೆ.

ಸುರಗುವಾದ ನೀನು ಸರ್ವಲಕ್ಷಣ ಸಂಪನ್ನನಿರುವೆ. ತ್ರಿಲೋಕಗಳಿಗೆ ಗುರುವೂ, ಮುಪ್ಪು, ಮರಣವಿಲ್ಲದವನೂ ಆಗಿರುವೆ. ಕ್ರೋಧರಹಿತನೂ, ಕಚನ ತಂದೆಯೂ, ಆಶ್ರಿತ ಜನರಿಗೆ ಕಲ್ಪವೃಕ್ಷದಂತೆಯೂ ಆಗಿರುವೆ. ಶಿವಗುರುಗುಹರ ಸಂತೋಷಕ್ಕೆ ಪಾತ್ರನಾಗಿರುವೆ. ಪುತ್ರಭಾಗ್ಯವನ್ನು ಕರುಣಿಸುವೆ ನೀನು. ಚತುರ್ವಿಧವಾಕ್ಪ್ರವಾಹನೂ, ಪ್ರಕಾಶಪಡಿಸಿದವನೂ, ಅನಾಥರಕ್ಷಕನೂ, ದಯಾಸಾಗರನೂ, ಆದ ನಿನಗೆ ನಮಸ್ಕರಿಸುವೆ. ರೋಗರಹಿತನೂ, ನೀತಿಬೋಧಕನೂ, ಸ್ವತಂತ್ರನೂ ಆಗಿರುವೆ. ದೋಷರಹಿತನೂ, ವಿಶ್ವದ ನಾಯಕನೂ, ಲೋಕರಕ್ಷಕನೂ ಆಗಿರುವೆ. ಪೂರ್ಣನೂ ಯಜ್ಞರಕ್ಷಕನೂ ಆಗಿರುವ ಬೃಹಸ್ಪತಿಯೇ! ನಿನಗೆ ನಮೋನಮಃ

ಅಠಾಣ ರಾಗಲಕ್ಷಣ
ಆರೋಹಣ: ಸ ರಿ ಮ ಪ ನಿ ಪ ಧ ನಿ ಸ
ಅವರೋಹಣ: ಸ ನಿ ಸ ಧಾ ಪ ಮ ಪ ಗಾ ರಿ ಸ

ಈ ರಾಗಕ್ಕೆ ಆರೋಹಣ ಅವರೋಹಣಗಳು ಒಂದೇ ವಿಧವಾಗಿಲ್ಲ ಮತ್ತು ೨೯ನೇ‌ಮೇಳಕರ್ತ ರಾಗದ ಜನ್ಯವೆಂದೆ ಕೆಲವರೂ, ೨೮ನೇ ಮೇಳದಲ್ಲಿ ಜನ್ಯವೆಂದು ಕೆಲವರೂ ಅಭಿಪ್ರಾಯ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಈ ರಾಗದಲ್ಲಿ ಬರುವ ಎರಡೂ ನಿಷಾದ ಪ್ರಯೋಗಗಳು. ಮೇಲಿನ ಆರೋಹಣದಲ್ಲಿ 'ಪ ನಿ' ಎಂಬುದನ್ನು ಕೈಶಿಕಿನಿಷಾದದಿಂದಲೂ, 'ಧ ನಿ ಸ' ಎಂಬುದನ್ನು ಕಾಕಲಿನಿಷಾದದಿಂದಲೂ ಹಾಡಬೇಕು. ೨೯ನೇ ಮೇಲ ಧೀರಶಂಕರಾಭರಣವೇ ಇದರ ಜನಕ ರಾಗ ಎಂಬುದು ಹಲವರ ಅಭಿಪ್ರಾಯ.

ಈ ರಾಗವು ಪುರಾತನ ರಾಗ. ಭಾಷಾಂಗ ರಾಗ. ಈ ರಾಗವನ್ನು ಹಾಡುವುದಕ್ಕೆ ತುಂಬಾ ಅನುಭವಸ್ಥರೇ ಸೂಕ್ತ. ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಷಡ್ಜ, ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಪಂಚಮ, ಚತುಶ್ರುತಿ ಧೈವತ, ಕೈಶಿಕಿ ನಿಷಾದ ಮತ್ತು ಕಾಕಲಿ ನಿಷಾದಗಳು.

No comments:

Post a Comment