Wednesday, August 26, 2009

ಬುಧಮಾಶ್ರಯಾಮಿ

ಬುಧಮಾಶ್ರಯಾಮಿ

ರಾಗ: ನಾಟಕುರಂಜಿ.
ತಾಳ: ಮಿಶ್ರಜಾತಿ ಝಂಪೆತಾಳ

ಪಲ್ಲವಿ:
||ಬುಧಮಾಶ್ರಯಾಮಿ ಸತತಂ||
||ಸುರವಿನುತಂ, ಚಂದ್ರತಾರಾಸುತಂ|| (ಬುಧ)

ಅನುಪಲ್ಲವಿ:
||ಬುಧಜನೈರ್ವೇದಿತಂ ಭೂಸುರೈರ್ಮೋದಿತಂ||
||ಮಧುರ ಕವಿತಾಪ್ರದಂ ಮಹನೀಯ ಸಂಪದಂ || (ಬುಧ)

ಚರಣ:
||ಕುಂಕುಮ ಸಮದ್ಯುತಿಂ, ಗುರುಗುಹಮುದಾಕೃತಿಂ||
||ಕುಜವೈರಿಣಂ ಮಣಿ ಮಕುಟಹಾರ ಕೇಯೂರ ಕಂಕಣಾಧಿಧರಣಂ||
||ಕಮನೀಯತರ ಮಿಥುನ ಕನ್ಯಾಧಿಪಂ ಪುಸ್ತಕಕರಂ ನಪುಂಸಕಂ||
||ಕಿಂಕರ ಜನಮಹಿತಂ ಕಿಲ್ಬಷಾದಿರಹಿತಂ||‌
||ಶಂಕರ ಭಕ್ತಹಿತಂ ಸದಾನಂದಸಹಿತಂ|| (ಬುಧ)

ತಾತ್ಪರ್ಯ:
ದೇವತೆಗಳಿಂದ ಪೂಜಿಸಲ್ಪಡುವವನೂ, ಚಂದ್ರ ಮತ್ತು ತಾರಾಪುತ್ರನಾದ ಬುಧನನ್ನು ಆಶ್ರಯಿಸುತ್ತೇನೆ. ಪಂಡಿತೋತ್ತಮರಿಂದಲೇ ತಿಳಿಯಲು ಸಾಧ್ಯನಾದ, ಬ್ರಾಹ್ಮಣರಿಂದ ಸಂತಸಗೊಂಡ, ಮಧುರವಾದ ಕವಿತೆಗಳನ್ನು ರಚಿಸಲು ಶಕ್ತಿ ಕೊಡುವ, ಪೂಜ್ಯವಾದ ಸಂಪತ್ತುಳ್ಳ ಬುಧನನ್ನು ಆಶ್ರಯಿಸುತ್ತೇನೆ. ಕೇಸರಿಬಣ್ಣವುಳ್ಳ, ಗುರುಗುಹನ ಸಂತೋಷವೇ ಮೂರ್ತಿವೆತ್ತಂತಿರುವ, ಅಂಗಾರಕ ಶತ್ರುವೂ, ರತ್ನ ಕಿರೀಟ, ಮುತ್ತಿನಹಾರ, ತೋಳುಬಳೆಗಳಿಂದ ಅಲಂಕೃತನಾದ, ಮಿಥುನ-ಕನ್ಯಾ ರಾಶಿಗಳ ಅಧಿಪತಿಯಾದ, ಪುಸ್ತಕಧಾರಿಯೂ, ನಪುಂಸಕನೂ ಆದ ಬುಧನನ್ನು ಆಶ್ರಯಿಸುತ್ತೇನೆ. ಪಾಪಸಂಬಂಧವಿಲ್ಲದವನೂ, ಸೇವಕರಿಂದ ಸ್ತುತಿಸಲ್ಪಟ್ಟವನೂ, ಭಕ್ತ ಜನಮಂದಾರನೂ, ಸದಾ ಆನಂದದಿಂದಿರುವವನೂ ಆದ ಬುಧನನ್ನು ಆಶ್ರಯಿಸುತ್ತೇನೆ.

ನಾಟಕುರಂಜಿ ರಾಗಲಕ್ಷಣ:
ಆರೋಹಣ: ಸ ರಿ ಗ ಮ ದ ನಿ ಪ ದ ನಿ ಸ
ಅವರೋಹಣ: ಸ ನಿ ದ ಮ ಗ ಸ ಅಥವಾ ಸ ನಿ ದ ಮ ಗ ಮ ಪ ಗ ರಿ ಸ

ಈ ರಾಗವು ೨೮ನೇ ಮೇಳ ಹರಿಕಾಂಬೋಜಿಯಲ್ಲಿ ಜನ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿರುವ ಸ್ವರಸ್ಥಾನಗಳು: ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತು (ಶೃತಿ) ಶ್ರುತಿ ಧೈವತ, ಕೈಶಿಕಿ ನಿಷಾದ.

ಉಪಾಂಗ ರಾಗ. ಗಾಂಧಾರ, ಮಧ್ಯಮ ಮತ್ತು ಧೈವತಗಳು ರಾಗಚ್ಛಾಯಾಸ್ವರಗಳು. ಯಾವಾಗಲೂ ಹಾಡಬಹುದು. ಈ ರಾಗವನ್ನು ತುಂಬಾ ಅನುಭವಸ್ಥರಿಂದ ಕೇಳಬೇಕು.


No comments:

Post a Comment