Wednesday, August 5, 2009

ಚಂದ್ರಂಭಜ

ಚಂದ್ರಂಭಜ

ಇಂದು ಹುಣ್ಣಿಮೆ. ಆಗಸದಲ್ಲಿ ಚಂದ್ರನನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಚಂದ್ರಂಭಜ!’


ಅದೃಷ್ಟವಶಾತ್, ಈ ಕೃತಿ ತಂದೆಯವರ ಸಂಗೀತದ ಪುಸ್ತಕದಲ್ಲಿತ್ತು.
ಇದು ಅಸಾವೇರಿ ರಾಗದಲ್ಲಿದ್ದು, ಮಠ್ಯತಾಳದಲ್ಲಿದೆ.

ಆ ಕೃತಿ ಇಲ್ಲಿದೆ. ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಚಂದ್ರಂ ಭಜ ಮಾನಸ ಸಾಧುಹೃದಯಸದೃಶಂ|| (ಚಂದ್ರಂಭಜ)

ಅನುಪಲ್ಲವಿ:
||ಇಂದ್ರಾದಿ ಲೋಕಪಾಲೇಡಿತ ತಾರೇಶಂ||
||ಇಂದುಂ ಷೋಡಶಕಲಾಧರಂ ನಿಶಾಕರಂ||
||ಇಂದಿರಾ ಸಹೋದರಂ ಸುಧಾಕರ ಮನಿಶಂ|| (ಚಂದ್ರಂಭಜ)

ಚರಣ:
||ಶಂಕರಮೌಳಿ ವಿಭೂಷಣಂ ಶೀತಕಿರಣಂ||
||ಚತುರ್ಭುಜಂ ಮದನಚ್ಛತ್ರಂ ಕೃಪಾಕರಂ||
||ವೆಂಕಟೇಶನಯನಂ ವಿರಾಣ್ಮನೋವನಯನಂ||
||ವಿಧುಂ ಕುಮುದಮಿತ್ರಂ ವಿಧಿಗುರುಗುಹ ವಕ್ತ್ರಂ||
||ಶಶಾಂಕ ಗೀಶ್ಪತಿ ಶಾಪಾನುಗ್ರಹ ಪಾತ್ರಂ||
||ಶರಶ್ಚಂದ್ರಿಕಾ ಧವಳ ಪ್ರಕಾಶಗಾತ್ರಂ||
||ಕಂಕಣ ಕೇಯೂರಹಾರ ಮಕುಟಾದಿ ಧರಂ||
||ಪಂಕಜ ರಿಪು ರೋಹಿಣಿಪ್ರಿಯಕರ ಚತುರಂ|| (ಚಂದ್ರಂಭಜ)

ತಾತ್ಪರ್ಯ:
ಎಲೈ ಮನಸೇ! ಸತ್ಪುರುಷರ ಹೃದಯದಂತೆ ಪರಿಶುದ್ಧನಾದ ಚಂದ್ರನನ್ನು ಭಜಿಸು. ಇಂದ್ರಾದಿ ಲೋಕ ಪಾಲಕರಿಂದ ಸ್ತುತಿಸಲ್ಪಡುವ, ತಾರಾಧಿಪತಿಯಾದ ಹದಿನಾರು ಕಲೆಗಳನ್ನು ಹೊಂದಿರುವ, ರಾತ್ರಿಯನ್ನುಒಂಟುಮಾಡುವ, ಲಕ್ಷ್ಮಿಯ ಸೋದರನೂ, ಅಮೃತಕಿರಣನೂ ಆದ ಇಂದುವನ್ನು ಭಜಿಸು. ಚಂದ್ರನನ್ನು ಈಶ್ವರನು ತನ್ನ ತಲೆಯಲ್ಲಿ ಧರಿಸಿರುವನು. ನಾಲ್ಕು ಕೈಗಳುಳ್ಳ ಅವನ ಕಿರಣಗಳು ತಂಪು. ಮನ್ಮಥನಿಗೆ ಕೊಡೆಯಾಗಿರುವ ಚಂದ್ರನು ರಾತ್ರಿಕಾರಕ. ಪಾಪ ಪರಿಹಾರಕನಾದ ವಿಷ್ಣುವಿನ ಕಣ್ಣು ಚಂದ್ರ. ವಿಶ್ವರೂಪಿಯಾದ ವಿಷ್ಣುವಿನ ಹೃದಯದಲ್ಲಿ ಜನಿಸಿದವನು. ಕುಮುದಭಾಂಧವ, ಬ್ರಹ್ಮ ಮತ್ತು ಸುಬ್ರಹ್ಮಣ್ಯರ ಮುಖನಾದ ಆ ಚಂದ್ರನನ್ನು ಎಲೈ ಮನಸೇ! ಭಜಿಸು!

ಅಸಾವೇರಿ ರಾಗದ ಲಕ್ಷಣ
ಆರೋಹಣ:
ಸ ರಿ ಮ ಪ ದ ಸ
ಅವರೋಹಣ: ಸ ನಿ ಸ ಪ ದ ಮ ಪ ರಿ + ಗಾ ರಿ ಸ


ಈ ರಾಗವು ೮ನೇ ಮೇಳ ಹನುಮತೋಡಿಯಲ್ಲಿ ಜನ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿ ಬರುವ ಸ್ವರ ಸ್ಥಾನಗಳು: ಶುದ್ಧ ರಿಷಭ, ಚತುಶೃತಿ ರಿಷಭ +, ಸಾಧಾರಣ ಗಾಂಧಾರ, ಶುದ್ಧ ಧೈವತ, ಕೈಶಿಕಿ ನಿಷಾದ


ಇದು ಔಡವ-ವಕ್ರ ಸಂಪೂರ್ಣ ರಾಗ. ಭಾಷಾಂಗ ರಾಗ. ಚತುಶೃತಿ ರಿಷಭವು ಅನ್ಯಸ್ವರ. ಇದು ರೀಮಪಾ, ರಿಮಪದಾಪ, ಮುಂತಾದ ರಿಷಭವೇ ಮೊದಲಾಗಿಯುಳ್ಳ ಪ್ರಯೋಗಗಳಲ್ಲಿ ಬರುತ್ತದೆ. ಕೆಲವು ಕೃತಿಗಳು ಅನ್ಯಸ್ವರಗಳಲ್ಲೇ ಆರಂಭವಾಗುತ್ತವೆ. ಉದಾ: ದೀಕ್ಷಿತರ 'ಚಂದ್ರಂಭಜ' ಮತ್ತು ತ್ಯಾಗರಾಜರ 'ಲೇಕನಾ' ಎಂಬ ಕೃತಿಗಳು. ಶುದ್ಧ ರಿಷಭ, ಸಾಧಾರಣ ಗಾಂಧಾರ ಮತ್ತು ಶುದ್ಧ ಧೈವತಗಳು ರಾಗಚ್ಛಾಯಾಸ್ವರಗಳು. ಗಾಂಧಾರಕ್ಕೆ ಕಂಪಿತವೆಂಬ ಗಮಕವು ಬರುತ್ತದೆ. 'ಗಾರಿಸಾ'ಎಂಬ ಪ್ರಯೋಗದಲ್ಲಿ ಗಾಂಧಾರವು ರಿಷಭವನ್ನು ಅನುಸರಿಸಿಯೇ ಇರುತ್ತದೆ. ಹೀಗೆಯೇ 'ಪಾನಿದಾಪ' ಎಂಬ ಪ್ರಯೋಗದಲ್ಲಿ ನಿಷಾದವು ಧೈವತವನ್ನು ಅನುಸರಿಸುತ್ತದೆ.


ಅಸಾವೇರಿ ರಾಗವು ಗಮಕ ಮತ್ತು ರಕ್ತಿ ರಾಗ. ಬೆಳಿಗ್ಗೆ ೯ ಘಂಟೆಯಿಂದ ಮಧ್ಯಾಹ್ನ ೧೨ಘಂಟೆಯವರೆಗೆ ಹಾಡಲು ಉತ್ತಮವಾದ ಕಾಲ. ಕರುಣಾರಸ ಪ್ರಧಾನವಾದ ರಾಗ.


ಈ ರಾಗದಲ್ಲಿರುವ ಕೆಲವು ಪ್ರಸಿದ್ಧ ರಚನೆಗಳು:
೧. ರಾರಾಮಾಯಿಂಟಿ - ಆದಿತಾಳ - ತ್ಯಾಗರಾಜರು
೨. ಲೇಕನಾನಿನ್ನು - ಆದಿತಾಳ - ತ್ಯಾಗರಾಜರು
೩. ಚಂದ್ರಂಭಜ - ಮಠ್ಯತಾಳ - ಮುತ್ತುಸ್ವಾಮಿ ದೀಕ್ಷಿತರು
೪. ಶರಣಶರಣ - ಆದಿತಾಳ - ಅರುಣಾಚಲಕವಿ

No comments:

Post a Comment