Thursday, August 13, 2009

ಕೊಳಲು - ಒಂದಿಷ್ಟು ಮಾಹಿತಿ

ಕೊಳಲು

ಇಂದು ಕೃಷ್ಣ ಜನ್ಮಾಷ್ಟಮಿ, ಹಾಗಾಗಿ ಕೊಳಲಿನ ಬಗ್ಗೆ ಒಂದಿಷ್ಟು ಮಾಹಿತಿ ಕೊಡಲು ನನ್ನ ಪ್ರಯತ್ನ.

ಸಾಮಾನ್ಯವಾಗಿ ಕೊಳಲು ಎಲ್ಲರಿಗೂ ಪರಿಚಿತ. ಇದು ಸುಷಿರ ಅಥವಾ ಗಾಳಿ ವಾದ್ಯಗಳ ಗುಂಪಿಗೆ ಸೇರಿದ್ದು. ಶ್ರೀ ಕೃಷ್ಣನಲ್ಲಿ ಶೋಭಿಸುತ್ತಿದ್ದ ಮಹಾನ್ ವಾದ್ಯವಿದು. ಇದು ಒಂದು ಸಣ್ಣ ಕೊಳವೆಯಂತಿದ್ದು ಸುಮಾರು ೧೪ ಅಂಗುಲ ಉದ್ದ ಮತ್ತು ವ್ಯಾಸವು ಶೃತುಗೆ ಅನುಗುಣವಾಗಿ ವ್ಯತ್ಯಾಸಗೊಳ್ಳು ತ್ತದೆ. ಕೊಳವೆಯ ಒಳ ಭಾಗ ಟೊಳ್ಳಾಗಿದ್ದು ಊದಲು ಒಂದು ರಂಧ್ರ (ಮುಖ ರಂಧ್ರ), ನುಡಿಸಲು ೮ ರಂಧ್ರಗಳು ಒಂದೇ ಪಾರ್ಶ್ವದಲ್ಲಿ ಕಂಡು ಬರುತ್ತದೆ. ಮುಖ ರಂಧ್ರದ ಹತ್ತಿರದ ತುದಿಯನ್ನು ಮುಚ್ಚಲಾಗಿದ್ದು ಮತ್ತೊಂದು ತುದಿ ತೆರೆದಿರುತ್ತದೆ. ಮುಖರಂಧ್ರವನ್ನು ೩/೪ ಅಂಗುಲದಷ್ಟು ಅಂತರದಲ್ಲಿ ಕೊರೆಯಲಾಗಿರುತ್ತದೆ. ತಾರ ರಂಧ್ರವು ತಾರ ಷಡ್ಜವನ್ನು ಮೂಡಿಸುತ್ತದೆ. ನುಡಿಸುವ ರಂಧ್ರಗಳು ಮುಖರಂಧ್ರಕ್ಕಿಂತ ವ್ಯಾಸದಲ್ಲಿ ಚಿಕ್ಕದಾಗಿರುತ್ತದೆ ಹಾಗೂ ಮೊನಚಾಗಿರುತ್ತದೆ. ತುಟಿಯು ಮತ್ತು ಬೆರಳುಗಳ ಚಾಲನೆಯಿಂದ ಸ್ವರಗಳ ಗಮಕವನ್ನು ನಿರ್ವಹಿಸಲಾಗುತ್ತದೆ. ವಿಕೃತಿ ಸ್ವರ ಪ್ರಭೇದಗಳನ್ನು ಆಯಾ ಸ್ವರದ ರಂಧ್ರದಲ್ಲೇ ಬೆರಳುಗಳ ಚಾಲನೆಯಿಂದಲೂ ಹಾಗೂ ಗಾಳಿಯ ಒತ್ತಡದಿಂದಲೂ ಸ್ಪುರಿಸಲಾಗುತ್ತದೆ.

ಕೊಳಲನ್ನು ಬಲಗಡೆಗೆ ಅಡ್ಡವಾಗಿ ಹೆಬ್ಬೆಟ್ಟುಗಳ ಆಧಾರದ ಮೇಲೆ ಹಿಡಿದುಕೊಂಡು, ಕೆಳತುಟಿಯ ಸಮೀಪದಲ್ಲಿಟ್ಟು ಮುಖ ರಂಧ್ರದ ಮೂಲಕ ಊದಲಾಗುತ್ತದೆ. ಬಲಗೈಯ ನಾಲ್ಕು ಬೆರಳುಗಳು ಹಾಗೂ ಎಡಗೈಯ ಮೂರು ಬೆರಳುಗಳಿಂದ ರಂಧ್ರಗಳನ್ನು ತೆರೆದು, ಮುಚ್ಚುವುದರಿಂದ ಆಯಾ ಸ್ವರಗಳನ್ನು ಹೊರಡಿಸಲಾಗುತ್ತದೆ. ಈ ವಾದ್ಯದಲ್ಲಿ ಎರಡೂವರೆ ಸ್ಥಾಯಿಗಳಷ್ಟೇ ವ್ಯಾಪ್ತವಿದ್ದು, ಹೆಚ್ಚಿನ ವ್ಯಾಪ್ತಿಗೆ ಕೊಳಲನ್ನೇ ಬದಲಾಯಿಸಬೇಕಾಗುತ್ತದೆ. ಬಿದಿರು, ರಕ್ತ ಚಂದನ ಮತ್ತು ಇಬೋನಿ ಮರಗಳಿಂದ ಕೊಳಲು ತಯಾರಿಸಬಹುದಾದರೂ ಬಿದಿರಿನ ಕೊಳಲು ಮಾತ್ರ ಮಧುರವಾದ ತುಂಬುನಾದವನ್ನು ಮೂಡಿಸಬಲ್ಲದು. ಸುಪ್ರಸಿದ್ಧ ವಿದ್ವಾಂಸ ಟಿ. ಆರ್. ಮಹಾಲಿಂಗಂ ಅವರು ಈ ವಾದ್ಯಕ್ಕೆ ಒಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿದುದಲ್ಲದೇ ಅನೇಕ ತಂತ್ರಗಳನ್ನು ಉಪಯೋಗಿಸಿ ಗಾಯನ ಶೈಲಿಯನ್ನು ಅನುಸರಿಸುತ್ತಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ.

No comments:

Post a Comment