Tuesday, August 11, 2009

ಅಂಗಾರಕಂ

ಅಂಗಾರಕಂ

ಇಂದು ಮಂಗಳವಾರ.
ಈ ದಿನ ನೆನಪಾದದ್ದು ದೀಕ್ಷಿತರ 'ಅಂಗಾರಕಂ' ಕೃತಿ.
ಈ ಕೃತಿಯ ಸಾಹಿತ್ಯ ತಂದೆಯವರ ಸಂಗೀತ ಪುಸ್ತಕದಲ್ಲಿತ್ತು.
(ನವಗ್ರಹ ಕೀರ್ತನೆಗಳು ತಂದೆಯವರ ಸಂಗೀತ ಪುಸ್ತಕದಲ್ಲಿದೆ).

ಈ ಕೃತಿ ಸುರುಟಿ ರಾಗದಲ್ಲಿದ್ದು, ರೂಪಕತಾಳದಲ್ಲಿದೆ.
ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.

ಪಲ್ಲವಿ:
||ಅಂಗಾರಕಮಾಶ್ರಯಾಮ್ಯಹಂ ವಿನತಾಶ್ರಿತಜನ ಮಂದಾರಂ||
||ಮಂಗಳವಾರಂ ವಾರಂ ವಾರಂ|| (ಅಂಗಾರಕಂ)

ಅನುಪಲ್ಲವಿ:
||ಶೃಂಗಾರಕ ಮೇಷವೃಶ್ಚಿಕ ರಾಶ್ಯಾಧಿಪತಿಂ||
||ರಕ್ತಾಂಗಂ ರಕ್ತಾಂಬರಾದಿಧರಂ ಶಕ್ತಿ ಶೂಲಧರಂ||
||ಮಂಗಳಂ ಕಂಬುಗಳಂ ಮಂಜುಳತರ ಪದಯಗಳಂ||
||ಮಂಗಳದಾಯಕ ಮೇಷತುರಂಗಂ ಮಕರೋತ್ತುಂಗಂ|| (ಅಂಗಾರಕಂ)

ಚರಣ:
||ದಾನವಸುರ ಸೇವಿತ ಮಂದಸ್ಮಿತ ವಿಲಸಿತವಕ್ತ್ರಂ||
||ಧರಣೀಪ್ರದಂ ಭ್ರಾತೃಕಾರಕಂ ರಕ್ತನೇತ್ರಂ||
||ದೀನರಕ್ಷಕಂ ಪೂಜಿತ ವೈದ್ಯನಾಥಕ್ಷೇತ್ರಂ||
||ದಿವ್ಯೌಘಾದಿ ಗುರುಗುಹ ಕಟಾಕ್ಷಾನುಗ್ರಹಪಾತ್ರಂ||
||ಭಾನುಚಂದ್ರ ಗುರುಮಿತ್ರಂ ಭಾಸಮಾನಸುಕಲತ್ರಂ||
||ಜಾನುಸ್ಥಹಸ್ತಚಿತ್ರಂ ಚತುರ್ಭುಜಂ ಅತಿವಿಚಿತ್ರಂ|| (ಅಂಗಾರಕಂ)

ತಾತ್ಪರ್ಯ:
ಭಕ್ತರಾದ ಆಶ್ರಿತಜನರಿಗೆ ಕಲ್ಪವೃಕ್ಷದಂತೆಯೂ, ಮಂಗಳವಾರಕ್ಕೆ ಅಧಿಪತಿಯೂ, ಭೂದೇವಿಯ ಕುಮಾರನೂ ಆದ ಅಂಗಾರಕನನ್ನು ಪುನಃ ಪುನಃ ಆಶ್ರಯಿಸುತ್ತೇನೆ.
ಮನೋಹರವಾದ ಮೇಷವೃಶ್ಚಿಕರಾಶ್ಯಾದಿಪತಿಯೂ, ಕೆಂಪು ಬಣ್ಣಾದ ಶರೀರವುಳ್ಳ ಕೆಂಪು ವಸ್ತ್ರ ಧರಿಸುವ, ಶಕ್ತಿ, ಶೂಲಾಯುಧಧಾರಿಯೂ, ಶಂಖದಂತಹ ಕತ್ತುಳ್ಳವನೂ, ಮನೋಹರ ಪಾದಗಳನ್ನುಳ್ಳವನೂ, ಮಂಗಳಕರನೂ ಆದ ಅಂಗಾರಕನನ್ನು ಆಶ್ರಯಿಸುತ್ತೇನೆ.
ದೇವದಾನವರಿಂದ ಸೇವಿಸಲ್ಪಡುವ ಮಂದಹಾಸ ಮೂಡಿರುವ ಮನೋಹರವಾದ ಮುಖವುಳ್ಳ, ಭೂಮಿಯನ್ನು ಕೊಡುವವನು, ಸಹೋದರಕಾರಕನೂ, ರಕ್ತನೇತ್ರನೂ, ದೀನರಕ್ಷಕನೂ, ವೈದ್ಯನಾಥಕ್ಷೇತ್ರದಲ್ಲಿ ವೆಶೇಷವಾಗಿ ಪೂಜಿಸಲ್ಪಡುವವನೂ, ಮಹಾಮಹಿಮ ಗುರುಗುಹ ಕಟಾಕ್ಷ ಅನುಗ್ರಹಗಳಿಗೆ ಪಾತ್ರನೂ ಆದ ಅಂಗಾರಕನನ್ನು ಪ್ರತಿಬಾರಿ ಆಶ್ರಯಿಸುತ್ತೇನೆ. ಸೂರ್ಯ ಚಂದ್ರ ಬೃಹಸ್ಪತಿಗಳಿಗೆ ಮಿತ್ರನೂ, ತೇಜಸ್ವ್ನೀ ಪತ್ನಿಯನ್ನು ಹೊಂದಿರುವವನೂ, ತೊಡೆಯಮೇಲೆ ಕೈಯಿಟ್ಟು, ಮನೋಹರವಾಗಿ ಕಾಣುವವನೂ, ಚತುರ್ಭುಜನೂ ಆದ ಅಂಗಾರಕನಿಗೆ ಪ್ರತಿಬಾರಿಯೂ ನಮಿಸಿ ಆಶ್ರಯ ಕೋರುತ್ತೇನೆ.

ಸುರುಟಿ ರಾಗದ ಲಕ್ಷಣ:
ಆರೋಹಣ:
ಸ ರಿ ಮ ಪ ನಿ ಸ
ಅವರೋಹಣ: ಸ ನಿ ದ ಪ ಮ ಗ ಪ ಮ ರಿ ಸ

ಈ ರಾಗವು ೨೮ನೇ ಮೇಳ ಹರಿಕಾಂಬೋಜಿಯಲ್ಲಿ ಜನ್ಯ. ಔಡವ-ವಕ್ರ ಸಂಪೂರ್ಣ ರಾಗ. ಆರೋಹಣದಲ್ಲಿ ಗಾಂಧಾರಧೈವತಗಳು ವರ್ಜ್ಯ. ಷಡ್ಜ ಮತ್ತು ಪಂಚಮಗಳೊಂದಿಗೆ ಈ ರಾಗದಲ್ಲಿ ಬರುವ ಸ್ವರಸ್ಥಾನಗಳು: ಚತುಶೃತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಚತುಶೃತಿ ಧೈವತ ಮತ್ತು ಕೈಶಿಕಿ ನಿಷಾದ.

ಉಪಾಂಗ ರಾಗ. ರಿಷಭ, ಮಧ್ಯಮ, ನಿಷಾದಗಳು ರಾಗಚ್ಛಾಯಾಸ್ವರಗಳು. ಗಮಕರಾಗ. ದೇಶೀಯ ರಾಗ. ಮಂಗಳಕರವಾದ ರಾಗ. ಯಾವಾಗಲೂ ಹಾಡಬಹುದು.

ಈ ರಾಗದಲ್ಲಿರುವ ಕೆಲವು ಪ್ರಸಿದ್ಧ ರಚನೆಗಳು:
೧. ಗೀತಾರ್ಥಮು - ಆದಿತಾಳ - ತ್ಯಾಗರಾಜರು
೨. ಅಂಗಾರಕಂ - ರೂಪಕ - ಮುತ್ತುಸ್ವಾಮಿ ದೀಕ್ಷಿತರು
೩. ಶೃಗಾರಿಂಚುಕೊನಿ - ಆದಿತಾಳ - ತ್ಯಾಗರಾಜರ ನೌಕಾಚರಿತ್ರೆ ಗೀತ ನಾಟಕ ಕೃತಿ

No comments:

Post a Comment